ಎಮರ್ಸನ್, ರಾಲ್ಭ್ ವಾಲ್ಡೊ
	1803-1882. ಅಮೆರಿಕದ ಪ್ರಸಿದ್ಧ ಕವಿ, ಪ್ರಬಂಧಕಾರ ಮತ್ತು ತತ್ತ್ವಬೋಧಕ. ಹುಟ್ಟಿದ್ದು ಬಾಸ್ಟನ್ ನಗರದಲ್ಲಿ; ಸತ್ತದ್ದು ಕಾನ್ಕರ್ಡ್ ಗ್ರಾಮದಲ್ಲಿ (ಎರಡೂ ಮಸಾಚುಸೆಟ್ಸ್ ರಾಜ್ಯದಲ್ಲಿವೆ). 1817ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಸೇರಿ ಕಾಯಕದಿಂದ ಹಣ ಸಂಪಾದಿಸಿ ವಿದ್ಯಾವಂತನಾದ. 1828ರಲ್ಲಿ ಪಾದ್ರಿಯಾದ. ಆದರೆ ಸಂಪ್ರದಾಯಬದ್ಧವಾದ ಮತಬೋಧನೆಯಲ್ಲಿ ನಂಬಿಕೆಯಾಗಲಿ ಸಂತೋಷವಾಗಲಿ ಇಲ್ಲದ್ದರಿಂದ ಮೂರು ವರ್ಷಗಳ ಅನಂತರ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಇಂಗ್ಲೆಂಡಿಗೆ ಭೇಟಿ ಕೊಟ್ಟ. ಅಲ್ಲಿ ಅವನಿಗೆ ಕೋಲ್‍ರಿಜ್, ವಡ್ರ್ಸ್‍ವರ್ತ್, ಕಾರ್ಲೈಲ್ ಮೊದಲಾದ ಇಂಗ್ಲಿಷ್ ಸಾಹಿತಿಗಳ ಪರಿಚಯವಾಯಿತು. ಅವರ ಅನೇಕ ಭಾವಗಳು ಅವನ ಮೇಲೆ ಪ್ರಭಾವ ಬೀರಿದವು. ನೇಚರ್ (ನಿಸರ್ಗ) ಎಂಬ ಅವನ ಮೊದಲ ಪುಸ್ತಕ ಪ್ರಕಟವಾದುದು 1836ರಲ್ಲಿ. ಮಾರನೆಯ ವರ್ಷ ಅವನ ಇನ್ನೊಂದು ಖ್ಯಾತ ಪ್ರಬಂಧ ಅಮೆರಿಕನ್ ಸ್ಕಾಲರ್ (ಅಮೆರಿಕದ ವಿದ್ವಾಂಸ) ಪ್ರಕಟವಾಯಿತು. ಆಗಿಂದಾಗ್ಗೆ ಹೀಗೆ ರಚಿತವಾದ ಪ್ರಬಂಧಗಳ ಸಂಕಲನವೊಂದು 1841ರಲ್ಲೂ ಇನ್ನೊಂದು 1844ರಲ್ಲೂ ಹೊರಬಿದ್ದವು. 1847ರಲ್ಲೂ 1848ರಲ್ಲೂ ಮತ್ತೆ ಇಂಗ್ಲೆಂಡಿಗೆ ಹೋಗಿ ಬಂದು ಅಲ್ಲಿ ತಾನು ಕಂಡ ಜನರ ಮತ್ತು ತನಗಾದ ಅನುಭವಗಳ ಆಧಾರದ ಮೇಲೆ ಇಂಗ್ಲಿಷ್ ಜನರ ಗುಣಾವಗುಣಗಳನ್ನು ವಿವರಿಸುವ ಇಂಗ್ಲಿಷ್ ಟ್ರೇಟ್ಸ್ ಎಂಬ ತನ್ನ ಗ್ರಂಥವನ್ನು 1856ರಲ್ಲಿ ಪ್ರಕಟಿಸಿದ. ಅವನ ಮತ್ತೊಂದು ಪ್ರಸಿದ್ಧ ಕೃತಿ ರೆಪ್ರೆಸೆಂಟಿವ್ ಮೆನ್ (ಪ್ರಾತಿನಿಧಿಕ ವ್ಯಕ್ತಿಗಳು) 1862ರಲ್ಲಿ ಬಂತು. ಈ ಮಧ್ಯೆ 1860ರಲ್ಲಿ ದಿ ಕಂಡಕ್ಟ್ ಆಫ್ ಲೈಪ್ (ಜೀವನದ ನಿರ್ವಹಣೆ) ಎಂಬ ಬರಹವೂ ಬೆಳಕನ್ನು ಕಂಡಿತ್ತು. ನೇಚರ್, ಸೆಲ್ಫ್ ರಿಲಯನ್ಸ್ (ಸ್ವಾವಲಂಬನೆ), ಹಿಸ್ಟರಿ (ಚರಿತ್ರೆ), ಅಮೆರಿಕನ್ ಸ್ಕಾಲರ್, ಓವರ್ ಸೋಲ್ (ಅಂತರಾತ್ಮ) ಎಂಬುವು ಅವನ ಅತ್ಯಂತ ಪ್ರಸಿದ್ಧ ಪ್ರಬಂಧಗಳು. 

	ಎಮರ್ಸನ್ ಹತ್ತೊಂಬತ್ತನೆ ಶತಮಾನದ ಅಮೆರಿಕದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದ ಬೌದ್ಧಿಕ ಮತ್ತು ಆಧ್ಯಾತ್ಮಿಕ ಚಳವಳಿಯೊಂದರ ಜೀವಜ್ಯೋತಿಗಳಲ್ಲಿ ಒಬ್ಬನಾಗಿದ್ದ. ಸ್ವತಂತ್ರ ವಿಚಾರಪರತೆಯನ್ನೂ ಆತ್ಮಸಾಕ್ಷಿಯ, ಆಧ್ಯಾತ್ಮಿಕ ಜೀವನದ ಔನ್ನತ್ಯವನ್ನೂ ಎತ್ತಿಹಿಡಿದ ಟ್ರಾನ್ಸೆಂಡೆಂಟಲಿಸ್ಟ್ ಪಂಥದ ಪ್ರೇರಕ ಶಕ್ತಿಯೂ ಆಧಾರಸ್ತಂಭವೂ ಆಗಿದ್ದ. ಮನುಷ್ಯನ ಹಿರಿಮೆ ಇರುವುದು ಬುದ್ಧಿ ಶಕ್ತಿ. ವಿವೇಕ ಮತ್ತು ವೈಯಕ್ತಿಕತೆಗಳಲ್ಲೇ ಹೊರತು ಪ್ರಾಪಂಚಿಕ ಐಶ್ವರ್ಯ, ಭೋಗಾನುಭವಗಳಲ್ಲಲ್ಲ - ಎಂಬುದು ಅವನ ಬೋಧನೆ. ಪ್ರತಿವ್ಯಕ್ತಿಯೂ ತನ್ನ ಅಂತರಾತ್ಮದ ಪ್ರೇರಣೆಯಂತೆ ನಡೆಯಬೇಕೆಂದೂ ಅದರ ಫಲವಾಗಿ ಸಮಾಜವನ್ನು ಎದುರಿಸಬೇಕಾಗಿ, ಜಗತ್ತಿನ ಸಂಪ್ರದಾಯಗಳನ್ನು ಮುರಿಯಬೇಕಾಗಿ ಬಂದರೆ ಹಿಂಜರಿಯಬಾರದೆಂದೂ ಅವನ ವಾದ. ದೈವವಾಣಿಯ ಪ್ರತೀಕದಂತಿರುವ ಅಂತರ್ವಾಣಿಯ ಅನುಸರಣೆ ನಮ್ಮ ಆದ್ಯಕರ್ತವ್ಯವೆಂಬುದು ಅವನ ಪ್ರಮುಖ ತತ್ತ್ವ, ಸ್ವಾತಂತ್ರ್ಯ ಮತ್ತು ವೈಯಕ್ತಿಕತೆಗಳ ಶ್ಲಾಘನೆ ಅವನ ಜೀವಿತೋದ್ಯೋಗವಾಗಿತ್ತು. ಸಹಜವಾಗಿಯೇ ರಾಜಕೀಯ ವಿಚಾರಗಳಲ್ಲೂ ಎಮರ್ಸನ್ ಸ್ವಾತಂತ್ರ್ಯ ಪ್ರೇಮಿಯಾಗಿದ್ದು, ನೀಗ್ರೊಗಳನ್ನು ಗುಲಾಮರಾಗಿಟ್ಟಿರುವ ಪದ್ಧತಿಯನ್ನು ವಿರೋಧಿಸಿದ. ಜಾನ್ ರಸ್ಕಿನ್‍ನಂತೆ ಎಮರ್‍ಸನ್ ಕೂಡ ಗಾಂಧೀಜಿಯವರ ಧೋರಣೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾನೆ. 

	ಎಮರ್ಸನ್ ಕವಿಯೂ ಆಗಿದ್ದ. ಪೊಯಮ್ಸ್ (1867), ಮೇ ಡೇ ಅಂಡ್ ಅದರ್ ಪೀಸಸ್ (1867)-ಎಂಬುವು ಅವನ ಎರಡು ಕವನ ಸಂಕಲನಗಳು. ಪ್ರಕೃತಿಪ್ರೇಮ, ಸ್ವಾತಂತ್ರ್ಯಪ್ರೇಮ, ಆಧ್ಯಾತ್ಮಿಕತೆಗಳು ಅವನ ಕಾವ್ಯದಲ್ಲಿ ಎದ್ದು ಕಾಣುವ ಗುಣಗಳು. ಭಗವದ್ಗೀತೆ, ಉಪನಿಷತ್ತುಗಳು, ಮೊದಲಾದ ಭಾರತೀಯ ಧಾರ್ಮಿಕಗ್ರಂಥಗಳ ಪ್ರಭಾವವನ್ನು ಅವನ ಕೃತಿಗಳಲ್ಲಿ ಕಾಣಬಹುದು. ಅವುಗಳಿಂದ ಅವನು ಅನೇಕ ವಾಕ್ಯಗಳನ್ನೂ ಶ್ಲೋಕಗಳನ್ನು ಉಲ್ಲೇಖಿಸುತ್ತಾನೆ. ಗೀತೆಯ ಸಾರದಂತಿರುವ ಅವನ ಬ್ರಹ್ಮ ಎಂಬ ಕವನ ಪ್ರಸಿದ್ಧವಾಗಿದೆ. 

	ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತರಾಗಿದ್ದ, ಆಗುತ್ತಿದ್ದ, ಅವನ ಕಾಲದ ಜನಕ್ಕೆ ಎಮರ್ಸನ್ನನ ಬೋಧನೆ ಮಾರ್ಗದರ್ಶಕವಾಯಿತು; ಶುದ್ಧ ಆದರ್ಶಗಳ ಆವಶ್ಯಕತೆಯನ್ನೂ ಹಿರಿಮೆಯನ್ನೂ ಅದು ಅವನ ಅರಿವಿಗೆ ತಂದಿತು. ಈ ಕಾರಣದಿಂದ ಎಮರ್ಸನ್‍ರ ಬರಹ ಸಮಕಾಲೀನ ಅಮೆರಿಕದವರಿಗೆ ಮಾತ್ರವಲ್ಲದೆ ಇತರರಿಗೂ ಮಾನ್ಯವಾಗಿರುತ್ತದೆ. 

	ಎಮರ್ಸನ್ನನ ಬರಹಗಳು ಬಹುಮಟ್ಟಿಗೆ ಪ್ರಬಂಧಗಳ ರೂಪದಲ್ಲಿವೆ. ಈ ಪ್ರಬಂಧಗಳಲ್ಲಿ ಅನೇಕವು ಅವನು ನಾನಾ ಕಡೆ ಮಾಡಿದ ಭಾಷಣಗಳು. ನಾಡು ನುಡಿಗಳಂಥ ವಾಕ್ಯಗಳಿಗೂ ಮನಮುಟ್ಟುವ ತರ್ಕಸರಣಿಗೂ ಅವುಗಳಲ್ಲಿ ವ್ಯಕ್ತವಾಗಿರುವ ಆತ್ಮವಿಶ್ವಾಸ ಆಶಾವಾದಿತ್ವಗಳಿಗೂ ಅವು ಹೆಸರಾದಂತಿವೆ. 						
   (ಎಂ.ಆರ್.; ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ